ಶತಾಧಿಪತಿಯ ಅತಿಶಯ
ವಿಶ್ವಾಸ
(ಮತ್ತಾಯ ೮:೫-೧೩)
1ಜನರಿಗೆ ಮನಮುಟ್ಟುವಂತೆ ಬೋಧನೆ ಮಾಡಿದ ನಂತರ ಯೇಸುವು ಕಫೆರ್ನವುಮ್ ಎಂಬ ಊರಿಗೆ
ಬಂದರು. 2ಅಲ್ಲಿ ರೋಮ್ ಶತಾಧಿಪತಿಯೊಬ್ಬನ
ನೆಚ್ಚಿನ ಸೇವಕನು ಕಾಯಿಲೆಯಿಂದ ಸಾಯುವುದರಲ್ಲಿದ್ದನು. 3ಶತಾಧಿಪತಿಯು ಯೇಸುವಿನ ವಿಷಯವನ್ನು ಕೇಳಿ ಅವರ ಬಳಿಗೆ ಯೆಹೂದ್ಯ ಪ್ರಮುಖರನ್ನು
ಕಳುಹಿಸಿ, ತನ್ನ ಸೇವಕನನ್ನು ಗುಣಪಡಿಸಲು ಬರಬೇಕೆಂದು ಮನವಿ ಮಾಡಿಕೊಂಡನು. 4ಅವರು ಯೇಸುವಿನ ಬಳಿ ಹೋಗಿ, “ಆ ಶತಾಧಿಪತಿಯು ನಿಮ್ಮ ಉಪಕಾರಕ್ಕೆ ಅರ್ಹನು; 5ನಮ್ಮ ಜನರ ಮೇಲೆ ಅವನಿಗೆ ಪ್ರೀತಿಯಿದೆ; ಅಲ್ಲದೆ ನಮ್ಮ ಪ್ರಾರ್ಥನಾಮಂದಿರವನ್ನು
ಕಟ್ಟಿಸಿಕೊಟ್ಟವನೂ ಅವನೇ,” ಎಂದು ಬಹಳವಾಗಿ ವಿನಂತಿಸಿದರು.
6ಯೇಸು ಅವರ ಸಂಗಡವೇ ಹೊರಟರು.
ಮನೆಯಿಂದ ಸ್ವಲ್ಪ ದೂರವಿರುವಾಗಲೇ ಶತಾಧಿಪತಿಯು ತನ್ನ ಗೆಳೆಯರ ಮುಖಾಂತರ, “ಪ್ರಭುವೇ, ಇಷ್ಟು ಶ್ರಮ
ತೆಗೆದುಕೊಳ್ಳಬೇಡಿ; ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. 7ನಾನೆ ತಮ್ಮಲ್ಲಿಗೆ ಬರೋಣವೆಂದರೆ ಆ ಯೋಗ್ಯತೆಯೂ ನನಗಿಲ್ಲ. ತಾವು ಒಂದು
ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. 8ಏಕೆಂದರೆ,
ನಾನೂ ಮತ್ತೊಬ್ಬರ ಕೈಕೆಳಗಿರುವವನು; ನನ್ನ ಅಧೀನದಲ್ಲಿ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು
‘ಬಾ,’ ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ ‘ಹೋಗು,’ ಎಂದರೆ ಹೋಗುತ್ತಾನೆ. ಸೇವಕನಿಗೆ ‘ಇಂಥದ್ದನ್ನು
ಮಾಡು,’ ಎಂದರೆ ಮಾಡುತ್ತಾನೆ,” ಎಂದು ಹೇಳಿ ಕಳುಹಿಸಿದನು. 9ಅವನ ಆ ಮಾತುಗಳನ್ನು ಕೇಳಿದಾಗ ಯೇಸುವಿಗೆ ಆಶ್ಚರ್ಯವಾಯಿತು. ತಮ್ಮನ್ನು
ಹಿಂಬಾಲಿಸಿ ಬರುತ್ತಿದ್ದ ಜನರ ಗುಂಪಿನ ಕಡೆಗೆ ತಿರುಗಿ ನೋಡಿ, “ಇಂಥಾ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್
ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ,” ಎಂದರು. 10ಇತ್ತ ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಕಾಯಿಲೆ ಬಿದ್ದಿದ್ದ
ಆ ಸೇವಕನು ಸ್ವಸ್ಥವಾಗಿದ್ದುದನ್ನು ಕಂಡರು.
ವಿಧವೆಯ ಮಗನಿಗೆ
ಜೀವದಾನ
11ಇದಾದ ನಂತರ ಯೇಸುವು ನಾಯಿನ್
ಎಂಬ ಊರಿಗೆ ಹೊರಟರು. ಅವರೊಂದಿಗೆ ಶಿಷ್ಯರೂ ಅನೇಕ ಜನರೂ ಹೊರಟರು. 12ಊರ ಬಾಗಿಲನ್ನು ಸಮೀಪಿಸಿದಾಗ, ಒಂದು ಶವಯಾತ್ರೆಯನ್ನು ಅವರು ಎದುರುಗೊಂಡರು.
ಆ ಸತ್ತವನು ತನ್ನ ತಾಯಿಗೆ ಒಬ್ಬನೇ ಮಗ. ಆಕೆ ವಿಧವೆ. ಜನರ ದೊಡ್ಡ ಗುಂಪೊಂದು ಆಕೆಯೊಡನೆ ಬರುತ್ತಿತ್ತು.
13ಪ್ರಭು ಯೇಸು ಆಕೆಯನ್ನು ಕಂಡದ್ದೇ
ಕನಿಕರಗೊಂಡು, ‘ಅಳಬೇಡ’ ಎಂದು ಹೇಳಿ, 14ಚಟ್ಟದ ಹತ್ತಿರಕ್ಕೆ ಬಂದು,
ಅದನ್ನು ಮುಟ್ಟಿದರು. ಹೊತ್ತುಕೊಂಡು ಹೋಗುತ್ತಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು
ನಿನಗೆ ಹೇಳುತ್ತೇನೆ, ಎದ್ದೇಳು,” ಎಂದರು. 15ಸತ್ತವನು ಎದ್ದು ಕುಳಿತು ಮಾತನಾಡಲಾರಂಭಿಸಿದನು.
ಯೇಸು ಆ ಮಗನನ್ನು ತಾಯಿಗೆ ಒಪ್ಪಿಸಿದರು. 16ಎಲ್ಲರೂ ಭಯಭ್ರಾಂತರಾದರು.
“ಮಹಾಪ್ರವಾದಿಯೊಬ್ಬನು ನಮ್ಮಲ್ಲೇ ಉದಯಿಸಿದ್ದಾನೆ; ದೇವರು ತಮ್ಮ ಜನರನ್ನು ರಕ್ಷಿಸಲು ಬಂದಿದ್ದಾರೆ,”
ಎಂದು ದೇವರನ್ನು ಕೊಂಡಾಡಿದರು. 17ಯೇಸುವಿನ ಈ ಸಮಾಚಾರ ಜುದೇಯ
ನಾಡಿನ ಹಾಗೂ ಸುತ್ತಮುತ್ತಲಿನ ಪ್ರಾಂತದಲ್ಲೆಲ್ಲಾ ಹರಡಿತು.
ಸ್ನಾನಿಕ ಯೊವಾನ್ನನ
ಪ್ರಶ್ನೆಗೆ ಉತ್ತರ
(ಮತ್ತಾಯ ೧೧:೨-೧೯)
18ನಡೆದ
ಈ ಎಲ್ಲಾ ವಿಷಯಗಳು ಯೊವಾನ್ನನಿಗೆ ಆತನ ಶಿಷ್ಯರ ಮುಖಾಂತರ ತಿಳಿಯಿತು. 19 ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು,
“ಬರಬೇಕಾದವರು ನೀವೋ ಅಥವಾ ಬೇರೊಬ್ಬರಿಗಾಗಿ ನಾವು ಎದುರು ನೋಡಬೇಕೋ,” ಎಂದು ಯೇಸುವನ್ನು ಕೇಳಲು ಅವರ
ಬಳಿಗೆ ಕಳುಹಿಸಿದನು. 20
ಆ ಶಿಷ್ಯರು ಯೇಸುವಿನ ಬಳಿಗೆ ಬಂದು, “ಬರಬೇಕಾದವರು ನೀವೋ ಅಥವಾ ಬೇರೊಬ್ಬರನ್ನು ಎದುರು ನೋಡಬೇಕೋ ಎಂದು
ವಿಚಾರಿಸಲು ನಮ್ಮನ್ನು ತಮ್ಮ ಬಳಿಗೆ ಕಳುಹಿಸಿದ್ದಾರೆ,” ಎಂದರು. 21 ಅದೇ ಸಮಯದಲ್ಲಿ ಯೇಸು ರೋಗರುಜಿನಗಳಿಂದ ನರಳುತ್ತಿದ್ದ
ಹಾಗೂ ದೆವ್ವ ಹಿಡಿದಿದ್ದ ಅನೇಕರನ್ನು ಗುಣಪಡಿಸುತ್ತಿದ್ದರು ಮತ್ತು ಹಲವು ಮಂದಿ ಕುರುಡರಿಗೆ ದೃಷ್ಟಿಯನ್ನು
ದಯಪಾಲಿಸುತ್ತಿದ್ದರು. 22ಯೇಸು
ಅವರಿಗೆ ಪ್ರತ್ಯುತ್ತರವಾಗಿ, “ನೀವು ಕಂಡದ್ದನ್ನೂ ಕೇಳಿದ್ದನ್ನೂ ಯೊವಾನ್ನನಿಗೆ ಹೋಗಿ ತಿಳಿಸಿರಿ;
ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಟರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ,
ಸತ್ತವರು ಮತ್ತೆ ಜೀವ ಪಡೆಯುತ್ತಾರೆ, ದೀನದಲಿತರಿಗೆ ಶುಭಸಂದೇಶವನ್ನು ಪ್ರಕಟಿಸಲಾಗುತ್ತಿದೆ. 23ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು,”
ಎಂದು ಹೇಳಿಕಳುಹಿಸಿದರು.
24
ಬಂದಿದ್ದ ಶಿಷ್ಯರು ಹಿಂದಕ್ಕೆ ಹೋದ ಬಳಿಕ, ಯೇಸು ಜನಸಮೂಹಕ್ಕೆ ಯೊವಾನ್ನನ್ನು ಕುರಿತು ಹೀಗೆಂದರು:
“ಬೆಂಗಾಡಿನಲ್ಲಿ ನೀವು ಏನನ್ನು ನೋಡಲೆಂದು ಹೋದಿರಿ? ಗಾಳಿಗೆ ಓಲಾಡುವ ಜೊಂಡನ್ನೇ? 25 ಇಲ್ಲವಾದರೆ ಮತ್ತೇನನ್ನು ನೋಡಹೋದಿರಿ? ನಯವಾದ
ರೇಷ್ಮೆ ಉಡುಪನ್ನು ಧರಿಸಿರುವ ವ್ಯಕ್ತಿಯನ್ನೇ? ಅಂತಹ ಶೃಂಗಾರವಾದ ಉಡುಗೆ ತೊಡುಗೆಯನ್ನು ಧರಿಸಿ, ಭೋಗಜೀವನ
ನಡೆಸುವವರು ಅರಮನೆಗಳಲ್ಲಿರುತ್ತಾರಷ್ಟೆ! 26
ಹಾಗಾದರೆ ನೀವು ಇನ್ನೆನನ್ನು ನೋಡಲು ಹೋದಿರಿ? ಪ್ರವಾದಿಯನ್ನೇ? ಹೌದು, ಪ್ರವಾದಿಗಿಂತಲೂ ಶ್ರೇಷ್ಟನಾದವನನ್ನು
ನೋಡಿದಿರಿ, ಎಂಬುದು ನಿಜ. 27‘ಇದೋ,
ನನ್ನ ದೂತನನ್ನು ಮುಂದಾಗಿ ಕಳುಹಿಸುವೆನು. ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ಧಗೊಳಿಸುವನು,’-ಎಂದು
ಪವಿತ್ರಗ್ರಂಥದಲ್ಲಿ ಪ್ರಸ್ತಾಪಿಸಿರುವುದು ಈ ಯೊವಾನ್ನನನ್ನು ಕುರಿತೇ. 28ಮಾನವನಾಗಿ ಜನಿಸಿದ ಯಾವನೂ ಸ್ನಾನಿಕ ಯೊವಾನ್ನನಿಗಿಂತ
ಶ್ರೇಷ್ಟನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಆದರೂ ದೇವರ ಸಾಮ್ರಾಜ್ಯದಲ್ಲಿ ಕನಿಷ್ಟನೂ
ಕೂಡ ಅವನಿಗಿಂತ ಶ್ರೇಷ್ಟನೇ ಸರಿ,” ಎಂದರು.
29ಯೊವಾನ್ನನ
ಉಪದೇಶವನ್ನು ಜನಸಾಮಾನ್ಯರೆಲ್ಲರೂ ಕೇಳಿದರು. ಅವರು, ವಿಶೇಷವಾಗಿ ಸುಂಕದವರು, ದೈವಯೋಜನೆಗೆ ತಲೆಬಾಗಿ
ಆತನಿಂದ ಸ್ನಾನದೀಕ್ಷೆಯನ್ನು ಪಡೆದರು. 30ಆದರೆ
ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು ತಮ್ಮನ್ನು ಕುರಿತ ದೈವೇಚ್ಚೆಯನ್ನು ಅಲ್ಲಗೆಳೆದು, ಯೊವಾನ್ನನಿಂದ
ಸ್ನಾನದದೀಕ್ಷೆಯನ್ನು ಪಡೆಯದೆ ಹೋದರು.
ಲೋಕನೀತಿ
ದೈವನೀತಿಯಲ್ಲ
31ಯೇಸುವು
ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ? ಇವರು ಯಾರನ್ನು ಹೋಲುತ್ತಾರೆ?
32ಪೇಟೆ
ಬೀದಿಯಲ್ಲಿ ಕುಳಿತು,
‘ನಾವು
ಕೊಳಲನೂದಲು
ನೀವು
ಕುಣಿದಾಡಲಿಲ್ಲ
ನಾವು
ಶೋಕಗೀತೆಗಳ ಹಾಡಲು
ನೀವು
ಕಣ್ಣೀರಿಡಲಿಲ್ಲ’
ಎಂದು ಒಬ್ಬರಿಗೊಬ್ಬರು ಕೂಗಾಡುವ
ಮಕ್ಕಳನ್ನು ಹೋಲುತ್ತಾರೆ. 33ಸ್ನಾನಿಕ
ಯೊವಾನ್ನನು ಬಂದಾಗ ಅನ್ನ ಆಹಾರವನ್ನು ಸೇವಿಸಲಿಲ್ಲ, ದ್ರಾಕ್ಷಾರಸವನ್ನು ಮುಟ್ಟಲಿಲ್ಲ; ನೀವು ‘ಅವನಿಗೆ
ದೆವ್ವ ಹಿಡಿದಿದೆ,’ ಎಂದು ಹೇಳಿದಿರಿ; 34ನರಪುತ್ರನು
ಬಂದಾಗ ಅನ್ನ ಪಾನೀಯಗಳನ್ನು ಸೇವಿಸಿದನು; ನೀವು ‘ಇವನೊಬ್ಬ ಹೊಟ್ಟೆಬಾಕ, ಕುಡಕ, ಸುಂಕದವರ ಹಾಗೂ ಪಾಪಿಷ್ಟರ
ಗೆಳೆಯ,’ ಎನ್ನುತ್ತೀರಿ. 35ಆದರೆ
ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದನ್ನು ಅಂಗೀಕರಿಸುವ ಎಲ್ಲರೂ ಸಮರ್ಥಿಸುತ್ತಾರೆ,” ಎಂದರು.
ಪತಿತ ಪಾವನ ಯೇಸು
36ಒಬ್ಬ
ಫರಿಸಾಯನು ಯೇಸುವನ್ನು ಊಟಕ್ಕೆ ಆಹ್ವಾನಿಸಿದನು. ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತರು. 37ಅದೇ ಊರಿನಲ್ಲಿ ಪತಿತೆಯೊಬ್ಬಳು ಇದ್ದಳು. ಆಕೆ,
ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತಿದ್ದಾರೆಂದು ಕೇಳಿ ಒಂದು ಅಮೃತಶಿಲೆಯ ಭರಣಿ ತುಂಬ ಸುಗಂಧತೈಲವನ್ನು
ತೆಗೆದುಕೊಂಡು ಅಲ್ಲಿಗೆ ಬಂದಳು. 38ಅವಳು
ಯೇಸುವಿನ ಹಿಂಬದಿ*ಯಲ್ಲಿ
ಅಳುತ್ತಾ ನಿಂತು, ತನ್ನ ಕಂಬನಿಯಿಂದ ಅವರ ಪಾದಗಳನ್ನು ತೊಳೆದು ತಲೆಗೂದಲಿನಿಂದ ಒರೆಸಿ, ಆ ಪಾದಗಳಿಗೆ
ಮುತ್ತಿಟ್ಟು, ಸುಗಂಧತೈಲವನ್ನು ಹಚ್ಚಿದಳು. 39ಯೇಸುವನ್ನು
ಆಹ್ವಾನಿಸಿದ ಫರಿಸಾಯನು ಇದನ್ನು ನೋಡಿ, ‘ಇವನು ನಿಜವಾಗಿಯೂ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿರುವ
ಇವಳು ಯಾರು, ಎಂಥಾ ಪತಿತಳು ಎಂದು ತಿಳಿದುಕೊಳ್ಳುತ್ತಿದ್ದನು,’ ಎಂದು ತನ್ನೊಳಗೇ ಅಂದುಕೊಂಡನು. 40ಅದಕ್ಕೆ ಯೇಸು, “ಸಿಮೋನ್, ನಾನು ನಿನಗೆ ಹೇಳಬೇಕಾದ
ವಿಷಯವೊಂದಿದೆ,” ಎಂದರು. ಸಿಮೋನನು, “ಅದೇನು ಹೇಳಿ ಗುರುವೆ,” ಎಂದನು. 41ಆಗ ಯೇಸು, ಒಬ್ಬ ಸಾಲಿಗನಿಗೆ ಇಬ್ಬರು ಸಾಲಗಾರರಿದ್ದರು.
ಒಬ್ಬನು ಐನೂರು, ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಅವನಿಗೆ ಸಾಲಕೊಡಬೇಕಾಗಿತ್ತು. 42ಆ ಇಬ್ಬರಿಗೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಸಾಲಿಗನು
ಇಬ್ಬರ ಸಾಲವನ್ನು ಮನ್ನಾ ಮಾಡಿದನು. ಈಗ ಹೇಳು, ಈ ಇಬ್ಬರಲ್ಲಿ ಯಾರಿಗೆ ಆ ಸಾಲಿಗನ ಮೇಲೆ ಹೆಚ್ಚು ಪ್ರೀತಿ?”
ಎಂದು ಕೇಳಿದರು. 43ಅದಕ್ಕೆ
ಸಿಮೋನನು, “ಯಾರು ಹೆಚ್ಚು ಸಾಲದಿಂದ ಬಿಡುಗಡೆ ಹೊಂದಿದ್ದಾನೊ ಅವನೇ ಎಂದು ತೋರುತ್ತದೆ,” ಎಂದನು.
“ಸರಿಯಾಗಿ ಹೇಳಿದೆ,” ಎಂದರು ಯೇಸು. 44ಅನಂತರ
ಆ ಮಹಿಳೆಯ ಕಡೆಗೆ ತಿರುಗಿ ಸಿಮೋನನಿಗೆ, “ಈಕೆಯನ್ನು ನೋಡಿದೆಯಾ? ನಾನು ನಿನ್ನ ಮನೆಗೆ ಬಂದಾಗ ನೀನು
ನನ್ನ ಕಾಲಿಗೆ ನೀರು ಕೊಡಲಿಲ್ಲ; ಈಕೆ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತಲೆಗೂದಲಿನಿಂದ
ಒರೆಸಿದಳು. 45ನೀನು
ನನಗೆ ಮುತ್ತಿಟ್ಟು ಸ್ವಾಗತಿಸಲಿಲ್ಲ; ಆದರೆ ಈಕೆ ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುತ್ತಿಡುವುದನ್ನು
ನಿಲ್ಲಿಸಲಿಲ್ಲ; 46ನನ್ನ
ತಲೆಗೆ ನೀನು ಎಣ್ಣೆ ಹಚ್ಚಲಿಲ್ಲ; ಈಕೆ ನನ್ನ ಪಾದಗಳಿಗೆ ಸುಗಂಧತೈಲವನ್ನು ಹಚ್ಚಿರುವಳು. 47ಆದ್ದರಿಂದ ನಾನು ನಿನಗೆ ಹೇಳುವುದೇನೆಂದರೆ, ಈಕೆ
ಮಾಡಿದ ಪಾಪಗಳು ಅಪಾರವಾದರೂ ಅವುಗಳನ್ನು ಕ್ಷಮಿಸಲಾಗಿವೆ; ಇದಕ್ಕೆ ಈಕೆ ತೋರಿಸಿರುವ ಅಧಿಕವಾದ ಪ್ರೀತಿಯೇ
ಸಾಕ್ಷಿ. ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿ ತೋರಿಸುತ್ತಾನೆ,” ಎಂದರು. 48ಅನಂತರ ಯೇಸು ಆ ಮಹಿಳೆಗೆ: “ನಿನ್ನ ಪಾಪಗಳನ್ನು
ಕ್ಷಮಿಸಲಾಗಿದೆ,” ಎಂದರು. 49ಜೊತೆಗೆ
ಊಟಕ್ಕೆ ಕುಳಿತಿದ್ದವರು ಇದನ್ನು ಕೇಳಿ, “ಪಾಪಗಳನ್ನು ಕೂಡ ಕ್ಷಮಿಸುವ ಈತ ಯಾರು?” ಎಂದು ತಮ್ಮತಮ್ಮಲ್ಲೇ
ಹೇಳಿಕೊಂಡರು. 50ಯೇಸು
ಆಕೆಗೆ, “ನಿನ್ನ ವಿಶ್ವಾಸವು ನಿನ್ನನ್ನು ಉದ್ಧಾರ ಮಾಡಿದೆ; ಸಮಾಧಾನದಿಂದ ಹೋಗು,” ಎಂದರು.
*‘ಹಿಂಬದಿಯಲ್ಲಿ ಅಳುತ್ತಾ ನಿಂತು, ತನ್ನ ಕಂಬನಿಯಿಂದ
ಅವರ ಪಾದಗಳನ್ನು ತೊಳೆದು…’
ಎಂಬ ಪಠ್ಯವನ್ನು ಅರ್ಥೈಸಿಕೊಳ್ಳಲು ಯೆಹೂದ್ಯರ ಆಹಾರ ಸೇವನಾ ಪದ್ದತಿಯನ್ನು ಅರಿಯಬೇಕಾಗುತ್ತದೆ. ನೆಲದಿಂದ
ಸುಮಾರು ಒಂದಡಿಯಷ್ಟೆ ಎತ್ತರವಿರುವ ವಿಶಾಲವಾದ ಮೇಜಿನ ಸುತ್ತ ಕುಳಿತು ಯೆಹೂದ್ಯರು ಅನ್ನಪಾನೀಯಗಳನ್ನು
ಸೇವಿಸುತ್ತಾರೆ. ಕಾಲುಗಳನ್ನು ಹಿಂದಕ್ಕೆ ಮಡಚಿ ಎಡಪಕ್ಕಕ್ಕೆ ಓರೆಯಾಗಿ ಕುಳಿತುಕೊಳ್ಳುವಾಗ ಅವರ ಕಾಲುಗಳು
ಅವರ ಹಿಂಬದಿಯಲ್ಲಿ ಇರುತ್ತವೆ ಎಂಬುದನ್ನು ಓದುಗರು ಗಮನಿಸಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ