ಅಧ್ಯಾಯ 6


ಯೇಸುವು ಸಬ್ಬತ್ತಿಗೂ ಒಡೆಯ
(ಮತ್ತಾಯ ೧೨:೧-೮; ಮಾರ್ಕ ೨:೨೩-೨೮)

1ಒಂದು ಸಬ್ಬತ್‌ದಿನ ಯೇಸುವು ಗೋದಿಯ ಹೊಲಗಳನ್ನು ಹಾದು ಹೋಗುತ್ತಿದ್ದರು. ಅವರ ಶಿಷ್ಯರು ಕೆಲವು ತೆನೆಗಳನ್ನು ಕಿತ್ತು ಹೊಸಕಿ ತಿನ್ನಲಾರಂಭಿಸಿದರು. 2ಅದನ್ನು ಕಂಡು ಫರಿಸಾಯರಲ್ಲಿ ಕೆಲವರು, “”ಸಬ್ಬತ್‌ ದಿನದಲ್ಲಿ ನಿಷಿದ್ದವಾದುದನ್ನು ನೀವು ಮಾಡುವುದೇಕೆ?” ಎಂದು ಅವರನ್ನು ಆಕ್ಷೇಪಿಸಿದರು. 3ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೇ? 4ದಾವೀದನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತೆಗೆದುಕೊಂಡು ತಿಂದುದಲ್ಲದೇ ತನ್ನ ಸಂಗಡಿಗರಿಗೂ ಕೊಟ್ಟನಲ್ಲವೇ? 5ನರಪುತ್ರನು ಸಬ್ಬತ್ತಿಗೂ ಒಡೆಯನಾಗಿದ್ದಾನೆ,” ಎಂದು ಉತ್ತರಕೊಟ್ಟರು.

ಸತ್ಕಾರ್ಯಕ್ಕೆ ಕಾಲಭೇದವಿಲ್ಲ
(ಮತ್ತಾಯ ೧೨:೯-೧೪; ಮಾರ್ಕ ೩:೧-೬)

6ಮತ್ತೊಂದು ಸಬ್ಬತ್‌ದಿನ ಯೇಸುವು ಪ್ರಾರ್ಥನಾಮಂದಿರಕ್ಕೆ ಹೋಗಿ ಉಪದೇಶ ಮಾಡುತ್ತಿದ್ದರು. ಅಲ್ಲಿ ಬಲಗೈ ಬತ್ತಿಹೋಗಿದ್ದ ಒಬ್ಬಾತ ಇದ್ದನು. 7ಅವನನ್ನು ಸಬ್ಬತ್‌ದಿನದಲ್ಲಿ ಸ್ವಸ್ಥಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪುಹೊರಿಸಬಹುದೆಂಬ ಉದ್ದೇಶದಿಂದ ಧರ್ಮಶಾಸ್ತ್ರಿಗಳು ಮತ್ತು ಫರಿಸಾಯರು ಹೊಂಚು ಹಾಕಿ ನೋಡುತ್ತಿದ್ದರು. 8ಯೇಸು ಅವರ ಆಲೋಚನೆಗಳನ್ನು ಅರಿತು ಬತ್ತಿದ ಕೈಯುಳ್ಳವನಿಗೆ, “ಬಂದು ಇಲ್ಲಿ ನಿಲ್ಲು,” ಎಂದರು. ಅವನು ಎದ್ದು ಬಂದು ನಿಂತನು. 9ಆಗ ಯೇಸು ಅವರಿಗೆ, “ನಾನು ನಿಮಗೊಂದು ಪ್ರಶ್ನೆ ಹಾಕುತ್ತೇನೆ; ಸಬ್ಬತ್‌ದಿನದಲ್ಲಿ ಏನು ಮಾಡುವುದು ಧರ್ಮ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ?” ಎಂದರು. 10ಅನಂತರ ಸುತ್ತಲೂ ಇದ್ದವರೆಲ್ಲರನ್ನೂ ದಿಟ್ಟಿಸಿ ನೋಡಿ ಬತ್ತಿದ ಕೈಯುಳ್ಳವನ ಕಡೆಗೆ ತಿರುಗಿ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು. 11ಅವರಾದರೋ ಕ್ರೋಧಭರಿತರಾಗಿ, ಯೇಸುವಿಗೆ ಏನಾದರೂ ಮಾಡಬೇಕೆಂದು ತಮ್ಮತಮ್ಮೊಳಗೆ ಸಂಚು ಮಾಡಿದರು.

ಹನ್ನೆರಡು ಮಂದಿ ಪ್ರೇಷಿತರ ಆಯ್ಕೆ
(ಮತ್ತಾಯ ೧೦:೧-೪; ಮಾರ್ಕ ೩:೧೩-೧೯)


12ಒಮ್ಮೆ ಯೇಸುವು ಪ್ರಾರ್ಥನೆ ಮಾಡಲು ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. 13ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ಅವರಿಗೆ ‘ಪ್ರೇಷಿತರು’ ಎಂದು ಹೆಸರಿಟ್ಟರು. 14ಹೀಗೆ ಆಯ್ಕೆಯಾದವರು; ಪೇತ್ರನೆಂದು ಹೆಸರು ಪಡೆದ ಸಿಮೋನ ಮತ್ತು ಅವನ ಸಹೋದರ ಅಂದ್ರೇಯ, ಯಕೋಬ ಮತ್ತು ಯೊವಾನ್ನ, ಫಿಲಿಪ್ಪ ಮತ್ತು ಬಾರ್ತಲೊಮಾಯ, 15ಮತ್ತಾಯ ಮತ್ತು ತೋಮ, ಅಲ್ಫಾಯನ ಮಗ ಯಕೋಬ ಮತ್ತು ದೇಶಾಭಿಮಾನಿ ಎನಿಸಿಕೊಂಡ ಸಿಮೋನ, 16ಯಕೋಬನ ಮಗ ಯೂದ ಮತ್ತು ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ.

ಗುಣಪಡಿಸುವ ದಿವ್ಯಶಕ್ತಿ
(ಮತ್ತಾಯ ೪:೨೩-೨೫)

17ಅನಂತರ ಯೇಸುವು ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತದಿಂದಲೂ ಜೆರುಸಲೇಂ ಪಟ್ಟಣದಿಂದಲೂ ಸಮುದ್ರ ತೀರದ ಟೈರ್‌ ಹಾಗೂ ಸಿದೋನ್‌ ಪಟ್ಟಣಗಳಿಂದಲೂ ಜನಸಮೂಹವು ಅಲ್ಲಿಗೆ ಬಂದಿತ್ತು. 18ಯೇಸುವಿನ ಬೋಧನೆಯನ್ನು ಕೇಳುವುದಕ್ಕೂ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ಅಲ್ಲಿಗೆ ಬಂದು ಸೇರಿದ್ದರು. ದೆವ್ವಪೀಡಿತರು ಕೂಡ ಬಂದು ಸ್ವಸ್ಥರಾಗುತ್ತಿದ್ದರು.19ಯೇಸುವಿನಿಂದ ದಿವ್ಯಶಕ್ತಿ ಹರಿದು ಎಲ್ಲರನ್ನೂ ಗುಣಪಡಿಸುತ್ತಿತ್ತು. ಆದುದರಿಂದ ಅಲ್ಲಿದ್ದ ಜನರೆಲ್ಲರೂ ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು.

ನೈಜ ಭಾಗ್ಯವಂತರು ಯಾರು?
(ಮತ್ತಾಯ ೫:೧-೧೨)

20ಯೇಸುವು ತಮ್ಮ ಶಿಷ್ಯರ ಕಡೆಗೆ ದೃಷ್ಟಿಸಿ ನೋಡಿ, ಹೀಗೆಂದು ಬೋಧಿಸಿದರು:
 “ದೀನದಲಿತರೇ, ನೀವು ಭಾಗ್ಯವಂತರು!
ದೇವರ ಸಾಮ್ರಾಜ್ಯವು ನಿಮ್ಮದು.
21ಈಗ ಹಸಿದಿರುವವರೇ, ನೀವು ಭಾಗ್ಯವಂತರು!
ನಿಮಗೆ ಸಂತೃಪ್ತಿಯಾಗುವುದು.
ಈಗ ಅತ್ತು ಗೋಳಾಡುವವರೇ, ನೀವು ಭಾಗ್ಯವಂತರು!
ನೀವು ನಕ್ಕುನಲಿದಾಡುವಿರಿ.
22-23 ನರಪುತ್ರನ ಶಿಷ್ಯರು ನೀವಾದುದರಿಂದ ನಿಮ್ಮನ್ನು
ದ್ವೇಷಿಸಿ, ಬಹಿಷ್ಕರಿಸಿ, ಧಿಕ್ಕರಿಸಿ,
ನಿಮ್ಮ ಹೆಸರೆತ್ತುವುದು ಕೂಡ ಕೇಡೆಂದು
ತಿರಸ್ಕರಿಸುವಾಗ ನೀವು ಭಾಗ್ಯವಂತರು!
ಈ ಜನರ ಪೂರ್ವಜರು ಪ್ರವಾದಿಗಳನ್ನು
ಹೀಗೆಯೇ ತೆಗಳಿದ್ದರು. ಇವೆಲ್ಲಾ
ಸಂಭವಿಸುವಾಗ ಹಿಗ್ಗಿ ನಲಿದಾಡಿರಿ.
ಏಕೆಂದರೆ, ಸ್ವರ್ಗದಲ್ಲಿ ನಿಮಗೆ ಲಭಿಸುವ
ಪ್ರತಿಫಲವು ಮಹತ್ತರವಾದುದು.

ಶಾಪಗ್ರಸ್ತರು ಯಾರು?

24“ಆದರೆ ಧನಿಕರೇ, ನಿಮಗೆ ಧಿಕ್ಕಾರ!
ನೀವು ಸುಖಜೀವನವನ್ನು ಅನುಭವಿಸಿ ಆಗಿದೆ.
25ಈಗ ತಿಂದು ತೃಪ್ತಿಯಾಗಿರುವವರೇ, ನಿಮಗೆ ಧಿಕ್ಕಾರ!
ನೀವು ಹಸಿದು ಬಳಲುವಿರಿ.
ಈಗ ನಕ್ಕು ನಲಿದಾಡುವವರೇ, ನಿಮಗೆ ಧಿಕ್ಕಾರ!
ನೀವು ದುಃಖಿಸಿ ಗೋಳಾಡುವಿರಿ.
26ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ!
ಹೊಗಳಿಸಿಕೊಂಡಿದ್ದರು ಕಪಟ ಪ್ರವಾದಿಗಳು
ಹೀಗೆಯೇ ಈ ಜನರ ಪೂರ್ವಜರಿಂದ.

ಶತ್ರು ಪ್ರೇಮ
(ಮತ್ತಾಯ ೫:೩೮-೪೮; ೭:೧೨)

27ನನ್ನನ್ನು ಆಲಿಸುತ್ತಿರುವವರೇ, ನನ್ನ ಮಾತನ್ನು ಕೇಳಿರಿ:
“ನಿಮ್ಮ ಶತ್ರುಗಳನು ಪ್ರೀತಿಸಿರಿ,
ನಿಮ್ಮನು ದ್ವೇಷಿಸುವವರನು ಸತ್ಕರಿಸಿರಿ.
28ನಿಮ್ಮನ್ನು ಶಪಿಸುವವರನ್ನಾಶೀರ್ವದಿಸಿರಿ,
ನಿಮ್ಮ ನಿಂದಿಸುವವರಿಗಾಗಿ ಪ್ರಾರ್ಥಿಸಿರಿ.
29ನಿನ್ನ ಒಂದು ಕೆನ್ನೆಗೆ ಹೊಡೆಯುವವನಿಗೆ
ಇನ್ನೊಂದು ಕೆನ್ನೆಯನು ತೋರು,
ನಿನ್ನ ಮೇಲಂಗಿಯನು ಕಿತ್ತುಕೊಳ್ಳುವವಗೆ
ಒಳ ಅಂಗಿಯನ್ನೂ ತೆಗೆದುಕೊಳ್ಳಲು ಬಿಡು.
30ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡು.
ತಿರುಗಿ ಕೇಳದಿರು ನಿನ್ನ ಸೊತ್ತನು ಕಸಿದುಕೊಳ್ಳುವವನಿಂದ.
31ಅಲ್ಲದೆ, ಇತರರು ನಿಮಗೆ ಏನೇನು
ಮಾಡಬೇಕೆಂದು ನೀವು ಬಯಸುವಿರೋ
ನೀವದನ್ನೇ ಮಾಡಿರಿ ಅವರಿಗೂ.
32ನಿಮ್ಮನು ಪ್ರೀತಿಸುವವರನೆ
ನೀವು ಪ್ರೀತಿಸುವುದಾದರೆ ಅದೇನು ಪುಣ್ಯ?
ತಮ್ಮನು ಪ್ರೀತಿಸುವವರನು ಪಾಪಿಷ್ಟರು ಸಹ
ಪ್ರೀತಿಸುವರಲ್ಲವೇ?
33ಉಪಕಾರ ಮಾಡಿದವರಿಗೇ ಉಪಕಾರವ
ಮಾಡಿದರೆ ಅದೇನು ಪುಣ್ಯ?
ಪಾಪಿಷ್ಟರು ಸಹ ಹಾಗೆ ಮಾಡುವರಲ್ಲವೇ?
34ಸಾಲ ತೀರಿಸುವಂತಹ ನಂಬಿಗಸ್ಥರಿಗೆ
ಸಾಲ ಕೊಟ್ಟರೆ ಅದೇನು ಪುಣ್ಯ?
ಕೊಟ್ಟಷ್ಟೂ ಬರುತ್ತದೆಂದು
ಪಾಪಿಷ್ಟರೂ ಸಹ ಸಾಲ ಕೊಡುವರಲ್ಲವೇ?
35ಆದುದರಿಂದ ಪ್ರೀತಿಸಿರಿ ನಿಮ್ಮ ಶತ್ರುಗಳನ್ನು.
ಮಾಡಿರಿ ಅವರಿಗೆ ಒಳಿತನ್ನೇ.
ಕೊಡಿರಿ ಸಾಲವ ಪ್ರತಿಯಾಗಿ ಪಡೆವ ಆಸೆಯಿಡದೆ.
ದೊರಕುವುದಾಗ ನಿಮಗೆ ಮಹತ್ತಾದ ಸಂಭಾವನೆ.
ಆಗುವಿರಿ ನೀವು ಮಹೋನ್ನತ ದೇವರ ಮಕ್ಕಳು.
ದೇವರು ದುರ್ಜನರಿಗೂ ಕೃತಜ್ಞರಿಗೂ ಒಳ್ಳೆಯವರು.
36ದಯಾವಂತರಾಗರಿ ನೀವೂ ನಿಮ್ಮ ಪಿತ ದೇವರಂತೆ.


ಅಳೆಯಲಾಗುವುದು ನಿಮ್ಮನು, ನೀವು ಕೊಟ್ಟಿಹ ಅಳತೆಯೊಳು
(ಮತ್ತಾಯ ೭:೧-೫)

37“ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ, ದೇವರು ನಿಮ್ಮ ಬಗ್ಗೆಯೂ ತೀರ್ಪು ಕೊಡುವುದಿಲ್ಲ; ಪರರನು ದಂಡನೆಗೆ ಗುರಿಮಾಡಬೇಡಿ. ದೇವರು ನಿಮ್ಮನ್ನೂ ದಂಡನೆಗೆ ಗುರಿ ಮಾಡುವುದಿಲ್ಲ. 38ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿರಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳತೆ ಕೊಡುವರು,” ಎಂದರು.
39ಯೇಸುವು ಅವರಿಗೆ ಈ ಸಾಮತಿಯನ್ನು ಹೇಳಿದರು: “ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೆ? 40ಗುರುವಿಗಿಂತ ಶಿಷ್ಯನು ಶ್ರೇಷ್ಟನಲ್ಲ; ಆದರೂ ಪೂರ್ಣ ಶಿಕ್ಷಣ ಪಡೆದ ಪ್ರತಿಯೊಬ್ಬನು ಗುರುವಿನಂತೆ ಆಗುವನು.
41ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ, ಸೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ? 42ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ಕಾಣಲಾರದ ನೀನು, “ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಬಿಡುತ್ತೇನೆ” ಎಂದು ಸೋದರನಿಗೆ  ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದುಹಾಕು, ಅನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದು”

ಮರದ ಗುಣ ಫಲದಲ್ಲಿ
ಮತ್ತಾಯ ೭:೧೬-೨೦, ೧೨:೩೩-೩೫

43“ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 44ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳುಗಿಡದಿಂದ ಅಂಜೂರ ಕೀಳುವುದಿಲ್ಲ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಸಿಗುವುದಿಲ್ಲ. 45ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿಮಾತಾಗಿ ತುಳುಕುತ್ತದೆ”

ಸುಭದ್ರ ಅಸ್ತಿವಾರ
(ಮತ್ತಾಯ ೭:೨೪-೨೭)


46ನೀವು ನನ್ನನ್ನು ‘ಸ್ವಾಮೀ, ಸ್ವಾಮೀ,’ ಎಂದು ಕರೆಯುತ್ತೀರಿ; ಆದರೆ ನನ್ನ ಮಾತಿನಂತೆ ನಡೆಯುವುದಿಲ್ಲವೇಕೆ? 47ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ, ಅದರಂತೆ ನಡೆಯುವ ಪ್ರತಿಯೊಬ್ಬನು ಎಂಥವನಿಗೆ ಸಮಾನನೆಂದು ನಿಮಗೆ ಹೇಳುತ್ತೇನೆ ಕೇಳಿ: 48ಆಳವಾಗಿ ಅಡಿಪಾಯ ತೆಗೆದು, ಬಂಡೆಗಲ್ಲಿನ ಮೇಲೆ ಅಸ್ತಿವಾರ ಹಾಕಿ, ಮನೆ ಕಟ್ಟಿದವನಿಗೆ ಅವನು ಸಮಾನನು; ಹುಚ್ಚುಹೊಳೆ ಬಂದು ಪ್ರವಾಹವು ಆ ಮನೆಗೆ ಅಪ್ಪಳಿಸಿದರೂ ಅದು ಕದಲಲಿಲ್ಲ, ಕಾರಣ-ಆ ಮನೆಯನ್ನು ಸುಭದ್ರವಾಗಿ ಕಟ್ಟಲಾಗಿತ್ತು. 49ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದವನು ಅಸ್ತಿವಾರವೇ ಇಲ್ಲದ ಬರಿಯ ಮಣ್ಣಿನ ಮೇಲೆ ಮನೆ ಕಟ್ಟಿದವನಿಗೆ ಸಮಾನನು. ಆ ಮನೆಗೆ ಒದಗಿದ ಪತನವೋ ಭೀಕರ!” ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ