ಅಧ್ಯಾಯ 16


ಮೇಸ್ತ್ರಿಯ ಕುಯುಕ್ತಿ

1ಯೇಸು ತಮ್ಮ ಶಿಷ್ಯರನ್ನುದ್ದೇಶಿಸಿ ಇಂತೆಂದರು: “ಒಬ್ಬ ಧನಿಕನಿದ್ದ. ಅವನ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯಿದ್ದ. ಇವನು ಧನಿಕನ ಆಸ್ತಿಯನ್ನು ಹಾಳುಮಾಡುತ್ತಿದ್ದಾನೆಂದು ದೂರು ಬಂದಿತು. 2ಧನಿಕನು ಅವನನ್ನು ಕರೆದು, ‘ಏನಿದು, ನಿನ್ನ ವಿಷಯವಾಗಿ ನಾನು ಹೀಗೆಲ್ಲಾ ಕೇಳುತ್ತಿದ್ದೇನೆ? ನಿನ್ನ ಕೆಲಸದ ಲೆಕ್ಕಾಚಾರವನ್ನು ಒಪ್ಪಿಸಿಬಿಡು. ಇನ್ನು ನೀನು ಮೇಸ್ತ್ರಿಯಾಗಿರಲು ಆಗದು, ಎಂದ. 3ಆಗ ಮೇಸ್ತ್ರಿ, ‘ಈಗ ಏನು ಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದುಬಿಡುತ್ತಾನಲ್ಲಾ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ, ಎಂದು ಚಿಂತಾಕ್ರಾಂತನಾದ. 4ಮರುಕ್ಷಣ, ‘ಸರಿ, ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ, ಜನರು ನನ್ನನ್ನು ತಮ್ಮ ಮನೆಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ಈಗ ಗೊತ್ತಾಯಿತು, ಎಂದುಕೊಂಡ. 5ಯಜಮಾನನ ಸಾಲಗಾರರನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಂಡು, ‘ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲವೆಷ್ಟು? ಎಂದು ಕೇಳಿದ. 6ಅವನು, ‘ನೂರು ಬುದ್ದಲಿ ಎಣ್ಣೆ, ಎಂದ. ಅದಕ್ಕೆ ಮೇಸ್ತ್ರಿ, ‘ಇದೋ ನಿನ್ನ ಪತ್ರ. ಕುಳಿತುಕೊಂಡು ‘ಐವತ್ತು’ ಎಂದು ಬೇಗನೆ ಬರೆ, ಎಂದ. 7ಬಳಿಕ ಇನ್ನೊಬ್ಬನನ್ನು ಕರೆದು, ‘ನೀನೆಷ್ಟು ಸಾಲ ತೀರಿಸಬೇಕು? ಎಂದು ಕೇಳಿದ. ಅವನು, ‘ನೂರು ಖಂಡುಗ ಗೋದಿ’ ಎಂದಾಗ, ‘ಇದೋ ನಿನ್ನ ಪತ್ರ, ‘ಎಂಬತ್ತು’ ಎಂದು ಬರೆ’ ಎಂದನು. 8 ಅಪ್ರಾಮಾಣಿಕ ಮೇಸ್ತ್ರಿಯು ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಸಿಸಿದ. ಏಕೆಂದರೆ, ತಮ್ಮತಮ್ಮ ವ್ಯವಹಾರಗಳಲ್ಲಿ ಲೌಕಿಕ ಜನರು ಬೆಳಕಿನ ರಾಜ್ಯದ ಜನರಿಗಿಂತ ಜಾಣರು. 9ನಾನು ಹೇಳುವುದನ್ನು ಗಮನಿಸಿರಿ: ಲೌಕಿಕ ಆಸ್ತಿಪಾಸ್ತಿಯಿಂದ ಗೆಳೆಯರನ್ನು ಗಳಿಸಿಕೊಳ್ಳಿರಿ. ಅದು ವ್ಯಯವಾಗಿ ಹೋದಾಗ ನಿಮ್ಮನ್ನು ಅಮರನಿವಾಸಕ್ಕೆ ಸ್ವಾಗತಿಸಲಾಗುವುದು. 10ಸಣ್ಣ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳುವವನು ದೊಡ್ಡ ವಿಷಯಗಳಲ್ಲೂ ಪ್ರಾಮಾಣಿಕನಾಗಿ ನಡೆದುಕೊಳ್ಳುವನು. ಸಣ್ಣ ವಿಷಯಗಳಲ್ಲಿ ದ್ರೋಹ ಮಾಡುವವನು ದೊಡ್ಡ ವಿಷಯಗಳಲ್ಲೂ ದ್ರೋಹ ಮಾಡುತ್ತಾನೆ. 11ಲೌಕಿಕ ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮನ್ನು ನಂಬಿ ನೈಜ ಸಂಪತ್ತನ್ನು ನಿಮ್ಮ ವಶಕ್ಕೆ ಕೊಡುವವರು ಯಾರು? 12ಇನ್ನೊಬ್ಬರಿಗೆ ಸೇರಿದ ವಸ್ತುಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮ ಸ್ವಂತಕ್ಕೆ ಏನನ್ನಾದರೂ ಕೊಡುವವರಾರು?

13ಯಾರೂ ಇಬ್ಬರು ಯಜಮಾನರಿಗೆ ಸೇವೆ ಮಾಡಲು ಆಗುವುದಿಲ್ಲ; ಅವನು ಒಬ್ಬನನ್ನು ದ್ವೇಷಿಸಿ, ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆ ಮಾಡಲು ನಿಮ್ಮಿಂದಾಗದು, ಎಂದರು.

14ಹಣದಾಸೆಯಿಂದ ಕೂಡಿದ ಫರಿಸಾಯರು ಮಾತುಗಳನ್ನೆಲ್ಲಾ ಕೇಳಿ, ಯೇಸುವನ್ನು ಪರಿಹಾಸ್ಯ ಮಾಡಿದರು. 15ಅದಕ್ಕೆ ಯೇಸು, “ನೀವು ಮಾನವರ ಮುಂದೆ ಸತ್ಪುರುಷರೆಂದು ತೋರಿಸಿಕೊಳ್ಳುತ್ತೀರಿ; ಆದರೆ ದೇವರು ನಿಮ್ಮ ಅಂತರಂಗವನ್ನು ಅರಿತಿದ್ದಾರೆ. ಮಾನವರಿಗೆ ಅಮೂಲ್ಯವಾದುದು ದೇವರಿಗೆ ಅಸಹ್ಯವಾದುದು, ಎಂದರು.

ಯೇಸುವಿನ ಕೆಲವು ಗಮನಾರ್ಹ ವಚನಗಳು
(ಮತ್ತಾಯ ೧೧:೧೨-೧೩; ೫:೩೧-೩೨; ಮಾರ್ಕ ೧೦:೧೧-೧೨)

16 ”ಧರ್ಮಶಾಸ್ತ್ರ ಹಾಗೂ ಪ್ರವಾದನೆಗಳ ಪರಿಣಾಮ ಯೊವಾನ್ನನ ಕಾಲದವರೆಗೆ ಮಾತ್ರ. ಅನಂತರ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರಲಾಗುತ್ತಿದೆ. ಸರ್ವರೂ ರಾಜ್ಯದೊಳಗೆ ಒತ್ತರಿಸಿಕೊಂಡು ನುಗ್ಗುತ್ತಿದ್ದಾರೆ”.

17  ”ಭೂಮ್ಯಾಕಾಶಗಳು ಅಳಿದುಹೋಗಬಹುದು. ಆದರೆ ಧರ್ಮಶಾಸ್ತ್ರದಲ್ಲಿನ ಒಂದು ಚುಕ್ಕೆಯೂ ನಿರರ್ಥಕವಾಗದು”.

18 ”ಹೆಂಡತಿಯನ್ನು ಬಿಟ್ಟುಬಿಟ್ಟು ಬೇರೊಬ್ಬಳನ್ನು ಮದುವೆಯಾಗುವ ಪ್ರತಿಯೊಬ್ಬನೂ ವ್ಯಭಿಚಾರಿಯಾಗುತ್ತಾನೆ. ಅಂತೆಯೇ, ಗಂಡ ಬಿಟ್ಟವಳನ್ನು ಮದುವೆಯಾಗುವವನೂ ವ್ಯಭಿಚಾರಿಯಾಗುತ್ತಾನೆ”

ಭೋಗಿ ಮತ್ತು ಭಿಕಾರಿ

19 ”ಒಬ್ಬ ಧನಿಕನಿದ್ದ. ಬೆಲೆಬಾಳುವ ಉಡುಗೆ-ತೊಡುಗೆಗಳನ್ನೂ ನಯವಾದ ನಾರುಮಡಿಗಳನ್ನೂ ಧರಿಸಿಕೊಂಡು ಧರಿಸಿಕೊಂಡು ದಿನನಿತ್ಯವೂ ಸುಖಭೋಗಗಳಲ್ಲಿ ಮೈಮರೆಯುತ್ತಿದ್ದ. 20ಅವನ ಮನೆಯ ಬಾಗಿಲಲ್ಲೇ ಲಾಜ಼ರನೆಂಬ ಒಬ್ಬ ಭಿಕಾರಿ ಬಿದ್ದಿರುತ್ತಿದ್ದ. ಅವನ ಮೈಯೆಲ್ಲಾ ಹುಣ್ಣು. 21ಧನಿಕನು ತಿಂದು ಬಿಸಾಡಿದ ಎಂಜಲಿನಿಂದ ಹಸಿವು ನೀಗಿಸಿಕೊಳ್ಳಲು ಅವನು ಹಂಬಲಿಸುತ್ತಿದ್ದ. ಅಷ್ಟು ಮಾತ್ರವಲ್ಲ, ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದುವು.


            22ಒಂದು ದಿನ ಭಿಕಾರಿ ಸತ್ತುಹೋದ. ದೇವದೂತರು ಅವನನ್ನು ಕೊಂಡುಹೋಗಿ ಸ್ವರ್ಗಸೌಭಾಗ್ಯದಲ್ಲಿದ್ದ ಅಬ್ರಹಾಮನ ಪಕ್ಕದಲ್ಲೇ ಕೂರಿಸಿದರು. ಧನಿಕನು ಕೂಡ ಸತ್ತುಹೋದ. ಅವನ ಶವಸಂಸ್ಕಾರವೂ ಮುಗಿಯಿತು. 23ಪಾತಾಳದಲ್ಲಿ ಯಾತನೆ ಪಡುತ್ತಾ ಅವನು ಕಣ್ಣೆತ್ತಿ ನೋಡಿದಾಗ, ದೂರದಲ್ಲಿ ಅಬ್ರಹಾಮನನ್ನೂ ಅವನ ಪಕ್ಕದಲ್ಲೇ ಕುಳಿತಿದ್ದ ಲಾಜ಼ರನನ್ನೂ ಕಂಡ24 ಪಿತಾಮಹ ಅಬ್ರಹಾಮ, ನನ್ನ ಮೇಲೆ ಕನಿಕರವಿಡು. ಅಗ್ನಿಜ್ವಾಲೆಯಲ್ಲಿ ಬಾಧೆಪಡುತ್ತಿದ್ದೇನೆ; ಲಾಜ಼ರನು ತನ್ನ ತುದಿಬೆರಳನ್ನು ತಣ್ಣೀರಿನಲ್ಲಿ ಅದ್ದಿ, ನನ್ನ ನಾಲಿಗೆಗೆ ತಂಪನ್ನುಂಟು ಮಾಡುವಂತೆ ಅವನನ್ನು ಇಲ್ಲಿಗೆ ಕಳುಹಿಸಿಕೊಡು’ ಎಂದು ದನಿಯೆತ್ತಿ ಮೊರೆಯಿಟ್ಟ. 25ಅದಕ್ಕೆ ಅಬ್ರಹಾಮನು, ‘ಮಗನೇ, ಜೀವಮಾನದಲ್ಲಿ ಬೇಕಾದಷ್ಟು ಸುಖಸಂಪತ್ತನ್ನು ನೀನು ಅನುಭವಿಸಿದೆ; ಆದರೆ ಲಾಜ಼ರನು ದುಃಖದಾರಿದ್ಯ್ರವನ್ನು ಅನುಭವಿಸಿದ ಎಂಬುದನ್ನು ನೆನಪಿಗೆ ತಂದುಕೊ. ಆದರೆ ಈಗ ಅವನು ಇಲ್ಲಿ ಸುಖಪಡುತ್ತಿದ್ದಾನೆ; ನೀನು ಅಲ್ಲಿ ಸಂಕಟಪಡುತ್ತಿರುವೆ. 26ಅಷ್ಟುಮಾತ್ರವಲ್ಲ, ನಮಗೂ ನಿಮಗೂ ನಡುವೆ ಅಗಾಧ ಪ್ರಪಾತವು ಚಾಚಿದೆ. ಆದಕಾರಣ ಕಡೆಯಿಂದ ನಮ್ಮ ಬಳಿಗೆ ದಾಟಿಬರಲು ಸಾಧ್ಯವಿಲ್ಲ, ಎಂದ.  27ಆಗ ಧನಿಕ, ‘ಪಿತಾಮಹ ಅಬ್ರಹಾಮ, ಲಾಜ಼ರನನ್ನು ನನ್ನ ತಂದೆಯ ಮನೆಗಾದರೂ ಕಳುಹಿಸು. 28ನನಗೆ ಐವರು ಸೋದರರಿದ್ದಾರೆ; ಅವರೂ ಯಾತನಾ ಸ್ಥಳಕ್ಕೆ ಬಾರದಂತೆ ಇವನು ಹೋಗಿ ಎಚ್ಚರಿಕೆ ಕೊಡಲಿ, ಎಂದು ಬೇಡಿಕೊಂಡ. 29ಅದಕ್ಕೆ ಅಬ್ರಹಾಮನು, ‘ಅವರಿಗೆ ಎಚ್ಚರಿಕೆ ಕೊಡಲು ಮೋಶೆ ಮತ್ತು ಪ್ರವಾದಿಗಳ ಗ್ರಂಥಗಳಿವೆ. ಅವುಗಳಿಗೆ ಕಿವಿಗೊಡಲಿ, ಎಂದು ಉತ್ತರಕೊಟ್ಟ. 30 ‘ಇಲ್ಲ, ಪಿತಾಮಹ ಅಬ್ರಹಾಮ, ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಾಪಕ್ಕೆ ವಿಮುಖರಾಗುವರು, ಎಂದು ಧನಿಕನು ಮತ್ತೆ ಕೇಳಿಕೊಂಡ. 31ಅದಕ್ಕೆ ಅಬ್ರಹಾಮನು, ‘ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವಂತವಾಗಿ ಎದ್ದು ಬಂದರೂ ಅವರು ನಂಬುವುದಿಲ್ಲ, ಎಂದನು”.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ