ಅಧ್ಯಾಯ 12


ರಟ್ಟಾಗದ ಗುಟ್ಟಿಲ್ಲ
(ಮತ್ತಾಯ ೧೦:೨೬-೨೭)

1ಇಷ್ಟರಲ್ಲಿ ಸಾವಿರಾರು ಜನರು ಒಬ್ಬರನ್ನೊಬ್ಬರು ಒತ್ತರಿಸುತ್ತಾ ಕಿಕ್ಕಿರಿದು ನೆರೆದಿದ್ದರು. ಯೇಸು ಮೊದಲು ಶಿಷ್ಯರನ್ನುದ್ದೇಶಿಸಿ, “ಫರಿಸಾಯರ ‘ಹುಳಿಹಿಟ್ಟಿನ’ ಬಗ್ಗೆ, ಅಂದರೆ ಅವರ ಕಪಟತನದ ಬಗ್ಗೆ, ಎಚ್ಚರಿಕೆಯಿಂದಿರಿ. 2ಮುಚ್ಚುಮರೆಯಾಗಿರುವುದೆಲ್ಲಾ ಬಟ್ಟಬಯಲಾಗುವುದು; ಗುಟ್ಟಾಗಿರುವುದೆಲ್ಲಾ ರಟ್ಟಾಗುವುದು. 3ನೀವು ಕತ್ತಲಲ್ಲಿ ಹೇಳಿದ್ದೆಲ್ಲವನ್ನೂ ಬೆಳಕಿನಲ್ಲಿ ಕೇಳಲಾಗುವುದು; ಒಳಕೋಣೆಗಳಲ್ಲಿ ಕಿವಿಮಾತಾಗಿ ನೀವು ಹೇಳಿದ್ದೆಲ್ಲವನ್ನೂ ಮನೆಮಾಳಿಗೆಗಳ ಮೇಲಿಂದ ಸಾರಲಾಗುವುದು, ಎಂದರು.

ಮಾನವನ ಮೌಲ್ಯ
(ಮತ್ತಾಯ ೧೦:೨೮-೩೧)

4”ಗೆಳೆಯರೆ ನನ್ನ ಮಾತಿಗೆ ಕಿವಿಗೊಡಿರಿ: ದೇಹವನ್ನು ಕೊಂದುಹಾಕುವವರಿಗೆ ಭಯಪಡಬೇಡಿ. ಕೊಂದುಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು. 5ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ; ಸತ್ತ ಮೇಲೆ ನರಕದೊಳಕ್ಕೆ ತಳ್ಳುವ ಅಧಿಕಾರವುಳ್ಳಾತನಿಗೆ ಭಯಪಡಿರಿ. ಹೌದು, ಆತನಿಗೆ ಭಯಪಡಿರೆಂದು ನಿಮಗೆ ಒತ್ತಿಹೇಳುತ್ತೇನೆ. 6ಎರಡು ಕಾಸಿಗೆ ಐದು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. 7ಅಷ್ಟು ಮಾತ್ರವಲ್ಲ, ನಿಮ್ಮ ತಲೆಗೂದಲುಗಳೆಲ್ಲವೂ ಸಹ ಎಣಿಕೆಯಾಗಿವೆ. ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು.

ಬಹಿರಂಗ ಸಾಕ್ಷ್ಯ
(ಮತ್ತಾಯ ೧೦:೩೨-೩೩; ೧೨:೩೨;೧೦:೧೯-೨೦)
 8ಯಾರು ಜನರ ಮುಂದೆ ಬಹಿರಂಗವಾಗಿ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಅವನನ್ನು ನರಪುತ್ರನೂ ಸಹ ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು. 9ಆದರೆ ಯಾರು ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸುವನೋ ಅವನನ್ನು ದೇವದೂತರ ಮುಂದೆ ನಿರಾಕರಿಸಲಾಗುವುದು ಎಂಬುದು ನಿಶ್ಚಯ. 10ಯಾರಾದರೂ ನರಪುತ್ರನ ವಿರುದ್ಧ ಮಾತನಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮರನ್ನು ದೂಷಿಸುವವನಿಗೆ ಕ್ಷಮೆಯೇ ದೊರಕದು.
11ಪ್ರಾರ್ಥನಾಮಂದಿರಗಳಿಗೆ ಮತ್ತು ನ್ಯಾಯಾಧಿಪತಿಗಳ ಹಾಗೂ ದೇಶಾಧಿಕಾರಿಗಳ ಮುಂದೆ ನಿಮ್ಮನ್ನು ಎಳೆದೊಯ್ಯುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. 12ಏಕೆಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮರು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡುವರು, ಎಂದರು.

ದಡ್ಡನಾದ ಧನಿಕ

13ಜನಸಮೂಹದಿಂದ ಒಬ್ಬನು, “ಬೋಧಕರೇ, ನಮ್ಮ ಪಿತ್ರಾರ್ಜಿತ ಸ್ವತ್ತನ್ನು ನನಗೆ ಭಾಗಮಾಡಿಕೊಡುವಂತೆ ನನ್ನ ಸೋದರನಿಗೆ ಹೇಳಿ, ಎಂದು ಕೇಳಿಕೊಂಡನು. 14ಅದಕ್ಕೆ ಯೇಸು, “ಏನಯ್ಯಾ, ನಿಮ್ಮಿಬ್ಬರ ನ್ಯಾಯ ತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು ಯಾರು? ಎಂದು ಮರುಪ್ರಶ್ನೆ ಹಾಕಿದರು. 15ಅನಂತರ ಜನರನ್ನುದ್ದೇಶಿಸಿ, “ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ, ಎಷ್ಟೇ ಸಿರಿಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ, ಎಂದು ಹೇಳಿದರು.
16ಅನಂತರ ಅವರಿಗೆ ಸಾಮತಿಯನ್ನು ಹೇಳಿದರು, “ಒಬ್ಬ ಧನಿಕನಿದ್ದ. ಅವನ ಭೂಮಿಯಲ್ಲಿ ಒಮ್ಮೆ ಸಮೃದ್ಧಿಯಾಗಿ ಬೆಳೆಬಂತು. 17ಆಗ ಅವನು, ‘ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ? ಎಂದು ತನ್ನಲ್ಲೇ ಆಲೋಚಿಸುತ್ತಾ, 18  ‘ಹೌದು, ಹೀಗೆ ಮಾಡುತ್ತೇನೆ; ಇರುವ ಕಣಜಗಳನ್ನು ಕಿತ್ತುಹಾಕಿಸಿ, ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಸಾಮಗ್ರಿಗಳನ್ನೂ ತುಂಬಿಸಿಡುತ್ತೇನೆ. 19ಅಲ್ಲದೆ, ‘ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ; ಆರಾಮವಾಗಿರು. ತಿನ್ನು, ಕುಡಿ, ಸುಖಪಡು ಎಂದು ಹೇಳಿಕೊಳ್ಳುತ್ತೇನೆ, ಎಂದುಕೊಂಡ. 20ಆಗ ದೇವರು, “ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ. ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲಾ ಯಾರದೋ ಪಾಲಾಗುವುದು? ಎಂದರು. 21 “ತನಗೋಸ್ಕರ ಸಂಪತ್ತನ್ನು ಶೇಖರಿಸಿಟ್ಟುಕೊಂಡು ದೇವರ ದೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು, ಎಂದರು ಯೇಸು.

ಚಿಂತೆಯಿಂದ ಚಿತೆ
(ಮತ್ತಾಯ ೬:೨೫-೩೪)

22ಅನಂತರ ಯೇಸುವು ತಮ್ಮ ಶಿಷ್ಯರಿಗೆ, “ಈ ಕಾರಣದಿಂದ ನೀವು ನಿಮ್ಮ ಪ್ರಾಣಧಾರಣೆಗೆ ಏನು ಉಣ್ಣುವುದು, ದೇಹರಕ್ಷಣೆಗೆ ಏನು ಹೊದೆಯುವುದು ಎಂದು ಚಿಂತೆಮಾಡಬೇಡಿ. 23ಏಕೆಂದರೆ ಊಟಕ್ಕಿಂತ ಪ್ರಾಣ, ಉಡುಪಿಗಿಂತ ದೇಹ ಮೇಲಾದುದು. 24ಕಾಗೆಗಳನ್ನು ಗಮನಿಸಿರಿ: ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ. ಆದರೂ ದೇವರು ಅವುಗಳನ್ನು ಪೋಷಿಸುತ್ತಾರೆ. ಪಕ್ಷಿಗಳಿಗಿಂತ ನೀವು ಎಷ್ಟೋ ಮೇಲಾದವರು! 25ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಕೊಂಚ ಕಾಲವಾದರೂ ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು? 26ಇಂಥ ಅಲ್ಪಕಾರ್ಯಗಳನ್ನು ಮಾಡಲು ನೀವು ಅಶಕ್ತರಾಗಿರುವಾಗ, ಮಿಕ್ಕವುಗಳನ್ನು ಕುರಿತು ಚಿಂತಿಸುವುದೇಕೆ? 27ವನಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ: ಅವು ದುಡಿಯುವುದಿಲ್ಲ; ನೂಲುವುದಿಲ್ಲ. ಆದರೂ ಅರಸ ಸೋಲೊಮೋನನು ತನ್ನ ಸರ್ವ ವೈಭವದಲ್ಲಿ ಇದ್ದಾಗಲೂ, ಕುಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. 28ಎಲೈ ಅಲ್ಪ ವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಪಾಲಾಗುವ ಬಯಲಿನ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ, ನಿಮಗೆ ಇನ್ನೆಷ್ಟು ಮಾಡಲಾರರು! 29ಅಲ್ಲದೆ, ಅನ್ನಪಾನಗಳಿಗೆ ಏನು ಮಾಡೋಣ ಎಂದು ತೊಳಲಾಡಬೇಡಿ, ಪೇಚಾಡಬೇಡಿ. 30ಇವೆಲ್ಲವುಗಳಿಗಾಗಿ ಲೌಕಿಕ ಜನರು ಅರಸಿ ಅಲೆದಾಡುತ್ತಾರೆ. ಇವು ನಿಮಗೆ ಅಗತ್ಯವೆಂದು ನಿಮ್ಮ ತಂದೆಗೆ ತಿಳಿದಿದೆ. 31ಆದರೆ ನೀವು ದೇವರ ಸಾಮ್ರಾಜ್ಯಕ್ಕಾಗಿ ತವಕಪಡಿರಿ. ಇದರ ಸಮೇತ ಅವುಗಳನ್ನೂ ಕೂಡ ನಿಮಗೆ ಕೊಡಲಾಗುವುವು”.

ಸ್ವರ್ಗದಲ್ಲಿರಲಿ ನಿಮ್ಮ ಸಿರಿಸಂಪತ್ತು
(ಮತ್ತಾಯ ೬:೧೯-೨೧)

32”ಪುಟ್ಟ ಮಂದೆಯೇ, ಭಯಪಡಬೇಡ. ನಿನ್ನ ತಂದೆಯು ತಮ್ಮ ಸಾಮ್ರಾಜ್ಯವನ್ನು ನಿನಗೆ ನೀಡಲು ಇಷ್ಟಪಟ್ಟಿದ್ದಾರೆ. 33ನಿಮ್ಮ ಆಸ್ತಿಪಾಸ್ತಿಗಳನ್ನು ಮಾರಿ, ದಾನಧರ್ಮ ಮಾಡಿರಿ. ನಶಿಸದ ಹಣದ ಚೀಲಗಳನ್ನು ಗಳಿಸಿಕೊಳ್ಳಿರಿ; ಲಯವಾಗದ ಸಂಪತ್ತನ್ನು ಸ್ವರ್ಗದಲ್ಲಿ ಶೇಖರಿಸಿಟ್ಟುಕೊಳ್ಳಿರಿ. ಅಲ್ಲಿ ಅದು ಕಳ್ಳನಿಗೆ ದಕ್ಕುವುದಿಲ್ಲ; ನುಸಿ ಹಿಡಿದು ನಾಶವಾಗುವುದಿಲ್ಲ. 34ನಿಮ್ಮ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿಮ್ಮ ಹೃದಯ”.

ಸದಾ ಸಿದ್ಧರಾಗಿರಿ

35”ಸದಾ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ. 36ತಟ್ಟಿದ ತಕ್ಷಣ ಬಾಗಿಲು ತೆರೆಯಲು ಸಿದ್ಧರಿರುವ ಸೇವಕರಂತೆ ಇರಿ. ತನ್ನ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದಿರುಗುತ್ತಾನೋ, ಎಂದು ಅವರು ಎದುರು ನೋಡುತ್ತಾ ಇರುತ್ತಾರೆ. 37ಯಜಮಾನನು ಬಂದು ಯಾವ ಯಾವ ಸೇವಕ ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ, ಅಂಥವರು ಭಾಗ್ಯವಂತರು. ಏಕೆಂದರೆ, ಯಜಮಾನನೇ ನಡುಕಟ್ಟಿ ನಿಂತು, ಅವರನ್ನು ಊಟಕ್ಕೆ ಕೂರಿಸಿ, ಒಬ್ಬೊಬ್ಬನಿಗೂ ತಾನೇ ಉಪಚಾರ ಮಾಡುವನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. 38ಯಜಮಾನನು ಬರುವಾಗ ನಡುರಾತ್ರಿಯಾಗಿರಲಿ, ಮುಂಜಾವಾಗಿರಲಿ, ಎಚ್ಚರದಿಂದಿರುವ ಸೇವಕರನ್ನು ಅತನು ಕಂಡರೆ ಅವರು ಭಾಗ್ಯವಂತರು. 39ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನ ಹಾಕಲು ಬಿಡುವನೇ? ಇಲ್ಲ. 40ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು, ಎಂದರು.

ಪ್ರಾಮಾಣಿಕನಾದ ಮೇಸ್ತ್ರಿ
(ಮತ್ತಾಯ ೨೪:೪೫-೫೧)

41ಆಗ ಪೇತ್ರನು, “ಪ್ರಭೂ, ನೀವು ಹೇಳಿದ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೆಯೋ ಅಥವಾ ಎಲ್ಲರಿಗೋ? ಎಂದು ಕೇಳಿದನು. 42ಅದಕ್ಕೆ ಪ್ರಭು ಹೀಗೆಂದರು: “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿ ಆಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ. 43ಯಜಮಾನನು ಮನೆಗೆ ಹಿಂತಿರುಗಿ ಬಂದಾಗ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು. 44ಅಂಥವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ. 45ಆದರೆ ಸೇವಕನು ತನ್ನಲ್ಲೇ, ‘ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ, ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ 46ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸಹೀನರ ದುರ್ಗತಿಗೂ ಗುರಿಮಾಡುವನು. 47ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. 48ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು.

ಯೇಸುವಿನ ನಿಮಿತ್ತ ಭಿನ್ನ ಭೇದಗಳು
(ಮತ್ತಾಯ ೧೦:೩೪-೩೬)

49 “ನಾನು ಬಂದಿರುವುದು ಜಗತ್ತಿನಲ್ಲಿ  ದೈವಾಗ್ನಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ. 50ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕ ನನಗೆ ನೆಮ್ಮದಿಯಿಲ್ಲ. 51ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದವನೆಂದು ಭಾವಿಸಬೇಡಿ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿಹೇಳುತ್ತೇನೆ. 52ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ ಇಂದಿನಿಂದ ಇಬ್ಬರಿಗೆ ವಿರುದ್ಧ ಮೂವರು, ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು. 53ಮಗನಿಗೆ ವಿರುದ್ಧವಾಗಿ ತಂದೆ, ಮಗಳಿಗೆ ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ ಪರಸ್ಪರ ವಿರುದ್ಧವಾಗಿ ವಿಂಗಡಿಸಿಹೋಗುವರು, ಎಂದರು.

ಕಾಲಪ್ರಜ್ಞೆ
(ಮತ್ತಾಯ ೧೬:೨-೩)

54ಇದೂ ಅಲ್ಲದೆ ಯೇಸುವು ಜನಸಮೂಹವನ್ನು ನೋಡಿ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೇ, ‘ಭಾರಿ ಮಳೆ ಬರುತ್ತದೆ’ ಎನ್ನುತ್ತೀರಿ. ಹಾಗೆಯೇ ಆಗುತ್ತದೆ. 55ದಕ್ಷಿಣ ದಿಕ್ಕಿನ ಗಾಳಿ ಬೀಸಿದಾಗ ಉರಿ ಬಿಸಿಲು ಎನ್ನುತ್ತೀರಿ; ಅಂತೆಯೇ ಇರುತ್ತದೆ. 56ಆಷಾಡಭೂತಿಗಳೇ, ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿ ಅಥ್ಥಮಾಡಿಕೊಳ್ಳಬಲ್ಲಿರಿ; ಆದರೆ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ?

ವ್ಯಾಜ್ಯಗಾರನೊಂದಿಗೆ ನೇರಸಂಧಾನ
(ಮತ್ತಾಯ ೫:೨೫-೨೬)


57”ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು? 58ನೀನು ನ್ಯಾಯಾಧಿಪತಿಯ ಬಳಿಗೆ ಹೋಗಬೇಕಾಗಿ ಬಂದಲ್ಲಿ, ದಾರಿಯಲ್ಲೇ ನಿನ್ನ ವಿರೋಧಿಯೊಡನೆ ವ್ಯಾಜ್ಯ ತೀರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಮುಂದೆ ಎಳೆದೊಯ್ಯಬಹುದು; ನ್ಯಾಯಾಧಿಪತಿ ನಿನ್ನನ್ನು ಸೆರೆಮನೆಯಲ್ಲಿ ಹಾಕಬಹುದು. 59ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಕಡೇ ಕಾಸನ್ನೂ ಬಿಡದೆ ಎಲ್ಲವನ್ನೂ ಸಲ್ಲಿಸಬೇಕಾಗುವುದು ಎಂಬುದು ನಿಶ್ಚಯ, ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ