ಅಧ್ಯಾಯ 11


ಸ್ವಾಮಿ ಕಲಿಸಿಕೊಟ್ಟ ಪ್ರಾರ್ಥನೆ
(ಮತ್ತಾಯ ೬:೯-೧೩; ೭:೭-೧೧)
1ಒಮ್ಮೆ ಯೇಸುವು ಒಂದು ಸ್ಥಳದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಬಳಿಕ ಶಿಷ್ಯರಲ್ಲಿ ಒಬ್ಬನು, “ಪ್ರಭುವೇ, ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ,” ಎಂದನು. ಅದಕ್ಕೆ ಯೇಸು ಇಂತೆಂದರು, “ನೀವು ಹೀಗೆ ಪ್ರಾರ್ಥನೆ ಮಾಡಬೇಕು:
‘ತಂದೆಯೇ,
2ನಿಮ್ಮ ಪವಿತ್ರ ನಾಮವು ಪೂಜಿತವಾಗಲಿ;
ನಿಮ್ಮ ಸಾಮ್ರಾಜ್ಯ ಬರಲಿ.
3ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿರಿ.
4ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ,
ನಮ್ಮ ಪಾಪಗಳನ್ನು ಕ್ಷಮಿಸಿರಿ.
ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ.’

ಪ್ರಾರ್ಥನೆಯ ಫಲ

5ಪುನಃ ಯೇಸುವು ಶಿಷ್ಯರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು. 6ಪ್ರಯಾಣದಲ್ಲಿದ್ದ ನನ್ನ ಒಬ್ಬ ಸ್ನೇಹಿತನು ಅನಿರೀಕ್ಷಿತವಾಗಿ ಈಗ ತಾನೇ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು, 7ಆ ಸ್ನೇಹಿತ ಒಳಗಿನಿಂದಲೇ, ‘ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿಯಾಗಿದೆ; ನನ್ನ ಮಕ್ಕಳು ನನ್ನೊಂದಿಗೆ ಮಲಗಿದ್ದಾರೆ; ನನಗೆದ್ದು ಬರಲು ಆಗುವುದಿಲ್ಲ,’ ಎಂದು ಉತ್ತರಕೊಡುವುದ ಸಹಜವಲ್ಲವೇ? 8ಆದರೂ ತನ್ನ ಗೆಳೆಯ ಇವನು ಎಂದು, ಎದ್ದು ಬಂದು ಕೊಡದೇ ಇದ್ದರೂ, ನಾಚಿಕೆ ಪಡದೆ ಕೇಳುತ್ತಲೇ ಇದ್ದಾನಲ್ಲ ಎಂಬ ಕಾರಣದಿಂದಲಾದರೂ ಅವನು ಎದ್ದು ಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ. 9ಆದುದರಿಂದ ನಾನು ನಿಮಗೆ ಹೇಳುತ್ತೇನೆ: ಕೇಳಿರಿ, ನಿಮಗೆ ದೊರಕುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. 10ಏಕೆಂದರೆ, ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು”
11”ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ? 12ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ? 13ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅದಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮರನ್ನೇ ಅನುಗ್ರಹಿಸಬಲ್ಲರು!” ಎಂದರು.

ದೆವ್ವಗಳ ಉಚ್ಚಾಟನೆ-ದೈವೀರಾಜ್ಯದ ಉದ್ಘಾಟನೆ
(ಮತ್ತಾಯ ೧೨:೨೨-೩೦; ಮಾರ್ಕ ೩:೨೦-೨೭)

14ಒಮ್ಮೆ ಯೇಸುವು ಒಂದು ಮೂಕ ದೆವ್ವವನ್ನು ಬಿಡಿಸುತ್ತಿದ್ದರು. ಆ ದೆವ್ವವು ಬಿಟ್ಟುಹೋದ ಮೇಲೆ ಮೂಕನು ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು. 15ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. 16ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಭುತಕಾರ್ಯವನ್ನು ಮಾಡಿ ತೋರಿಸುವಂತೆ ಕೇಳಿದರು. 17ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು, “ಅಂತಃಕಲಹದಿಂದ ಒಡೆದುಹೋಗಿರುವ ಪ್ರತಿಯೊಂದು ರಾಜ್ಯವೂ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. 18ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳವಾಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು. 19ನಾನು ಬೆಲ್ಜಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪು ಕೊಡುವರು. 20ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯವು ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. 21ಬಲಿಷ್ಟನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲಾ ಸುರಕ್ಷಿತವಾಗಿರುತ್ತದೆ. 22ಆದರೆ ಇವನಿಗಿಂತಲೂ ಬಲಿಷ್ಟನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ. 23ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ,” ಎಂದರು.

ಮರಳಿ ಮನೆಗೆ ಬಂದ ದೆವ್ವ
(ಮತ್ತಾಯ ೧೨:೪೩-೪೫)
24ಯೇಸುವು ಬೋಧನೆಯನ್ನು ಮುಂದುವರಿಸುತ್ತಾ, “ದೆವ್ವವು ಒಂದು ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಕೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆ ಸಿಗದ ಕಾರಣ ಅದು, ‘ನಾನು ಬಿಟ್ಟು ಬಂದ ನನ್ನ ಮನೆಗೆ ಮರಳುತ್ತೇನೆ’ ಎಂದುಕೊಳ್ಳುತ್ತದೆ. 25ಅದು ಮರಳಿ ಬಂದಾಗ, ಮನೆಯು ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟವಾಗಿರುವುದನ್ನೂ ಕಾಣುತ್ತದೆ. 26ಅದು ಪುನಃ ಹೊರಟುಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳಹೊಕ್ಕು ನೆಲೆಸುತ್ತವೆ. ಕೊನೆಗೆ ಅವನ ಪರಿಸ್ಥಿತಿಯು ಪೂರ್ವಸ್ಥಿತಿಗಿಂತಲೂ ಅಧೋಗತಿಗೆ ಇಳಿಯುತ್ತದೆ,” ಎಂದರು.


ಮಾತೆಗಿಂತಲೂ ಮಿಗಿಲಾದವರು

27ಯೇಸುವು ಹೀಗೆ ಮಾತನಾಡುತ್ತಿದ್ದಾಗ ಜನಸಮೂಹದಿಂದ ಮಹಿಳೆಯೊಬ್ಬಳು, “ನಿಮ್ಮನ್ನು ಉದರದಲ್ಲಿ ಹೊತ್ತು, ನಿಮಗೆ ಮೊಲೆಯೂಡಿಸಿದ ತಾಯಿ ಭಾಗ್ಯವಂತಳು!” ಎಂದು ಕೂಗಿ ಹೇಳಿದಳು. 28ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!” ಎಂದರು.

ಯೋನನ ಸಂಕೇತ
(ಮತ್ತಾಯ ೧೨:೩೮-೪೨)

29ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುವು ಹೀಗೆಂದು ಮುಂದುವರಿಸಿದರು: “ಈ ಪೀಳಿಗೆಯು ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. 30ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು. 31ದೈವತೀರ್ಪಿನ ದಿನ ದಕ್ಷಿಣ ದೇಶದ ರಾಣಿಯು ಆ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೋಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೋಲೊಮೋನನಿಗಿಂತಲೂ ಮೇಲಾದವನು ಇದೋ, ಇಲ್ಲಿದ್ದಾನೆ. 32ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಯೋನನಿಗಿಂತಲೂ ಮೇಲಾದವನು ಇದೋ, ಇಲ್ಲಿದ್ದಾನೆ”.

ನೇತ್ರಗಳೇ ದೇಹದ ದೀಪಗಳು
(ಮತ್ತಾಯ ೫:೧೫; ೬:೨೨-೨೩)

33”ಯಾರೂ ದೀಪವನ್ನು ಹಚ್ಚಿ ನೆಲಮಾಳಿಗೆಯಲ್ಲಾಗಲಿ, ಬಟ್ಟಲ ಕೆಳಗಾಗಲಿ ಇಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲಿಡುತ್ತಾರೆ. 34ನಿನ್ನ ಕಣ್ಣೇ ದೇಹಕ್ಕೆ ದೀಪ; ನಿನ್ನ ಕಣ್ಣು ಸರಿಯಿದ್ದರೆ ನಿನ್ನ ದೇಹವೆಲ್ಲಾ ಕಾಂತಿಮಯವಾಗುವುದು. ಅದು ಕೆಟ್ಟಿದ್ದರೆ, ದೇಹವೆಲ್ಲಾ ಅಂಧಕಾರಮಯವಾಗುವುದು. 35ಆದುದರಿಂದ ನಿನ್ನೊಳಗಿರುವ ಬೆಳಕಿಗೆ ಕತ್ತಲೆ ಕವಿಯದಂತೆ ಎಚ್ಚರಿಕೆ ವಹಿಸು. 36ದೇಹದ ಯಾವುದೊಂದು ಭಾಗವು ಕತ್ತಲೆಯಿಲ್ಲದೆ ದೇಹವೆಲ್ಲಾ ಕಾಂತಿಮಯವಾಗಿದ್ದರೆ, ದೀಪವು ತನ್ನ ಪ್ರಕಾಶದಿಂದ ನಿನ್ನನ್ನು ಬೆಳಗಿಸುವಂತೆ, ನಿನ್ನ ದೇಹದಾದ್ಯಂತವೂ ದೇದೀಪ್ಯಮಾನವಾಗಿರುವುದು,” ಎಂದರು.

ಒಳಗೆ ಕೊಳಕು ಹೊರಗೆ ಥಳಕು
(ಮತ್ತಾಯ ೨೩:೧-೩೬; ಮಾರ್ಕ ೧೨:೩೮-೪೦)

37ಯೇಸುವು ತಮ್ಮಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು. 38ಊಟಕ್ಕೆ ಮುಂಚೆ ಅವರು ಕೈಕಾಲುಗಳನ್ನು ತೊಳೆಯದೆ ತೊಳೆಯದೆ ಹೋದುದನ್ನು ಕಂಡು ಫರಿಸಾಯನು ಚಕಿತನಾದನು. 39ಆಗ ಯೇಸು, “ಫರಿಸಾಯರಾದ ನೀವು ಲೋಟ ಮತ್ತು ಊಟದ ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ. 40ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಲಿಲ್ಲವೆ? 41ನಿಮ್ಮ ತಟ್ಟೆ, ಲೋಟಗಳಲ್ಲಿರುವುದನ್ನು ಮೊಟ್ಟಮೊದಲು ದಾನಮಾಡಿರಿ. ಆಗ ಸಮಸ್ತವೂ ನಿಮಗೆ ಶುದ್ಧಿಯಾಗಿರುವುದು. 42ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ ಒಂದು ಪಾಲು ಸಲ್ಲಿಸುತ್ತೀರಿ, ಸರಿ. ಆದರೆ ನ್ಯಾಯ ನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ, ನೀವು ಅವುಗಳನ್ನು ಅಲಕ್ಷ್ಯಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತ್ತು. 43ಫರಿಸಾಯರೇ, ನಿಮಗೆ ಧಿಕ್ಕಾರ! ಪ್ರಾರ್ಥನಾಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರವನ್ನು ಅಪೇಕ್ಷಿಸುತ್ತೀರಿ. 44ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧೀಗಳೆಂದು ತಿಳಿಯದೆಯೇ ಜನರು ಅವುಗಳ ಮೇಲೆ ನಡೆದಾಡುತ್ತಾರೆ,” ಎಂದರು.
45ಇದನ್ನು ಕೇಳಿದ ಒಬ್ಬಶಾಸ್ತ್ರಜ್ಞನು, “ಬೋಧಕರೇ, ನೀವು ಹೀಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು,” ಎಂದನು. 46ಅದಕ್ಕೆ ಯೇಸು, “ಶಾಸ್ತ್ರಜ್ಞರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ಆದರೆ ನೀವು ನಿಮ್ಮ ಕಿರು ಬೆರಳಿನಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ. 47ನಿಮಗೆ ಧಿಕ್ಕಾರ! ನಿಮ್ಮ ಪಿತೃಗಳು ಕೊಂದು ಹಾಕಿದ ಪ್ರವಾದಿಗಳಿಗೆ ನೀವು ಅಂದದ ಗೋರಿಗಳನ್ನು ನಿರ್ಮಿಸುತ್ತೀರಿ. 48ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಅನುಮೋದಿಸುತ್ತೀರಿ ಎಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ ಪ್ರವಾದಿಗಳನ್ನು ಕೊಂದವರು ಅವರಾದರೆ, ಗೋರಿ ನಿರ್ಮಿಸುತ್ತಿರುವವರು ನೀವು. 49ಈ ಕಾರಣದಿಂದಲೇ ‘ದೈವಜ್ಞಾನ’ ಹೇಳಿರುವುದೇನೆಂದರೆ: ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಪ್ರೇಷಿತರನ್ನೂ ಕಳುಹಿಸುವೆನು; ಅವರಲ್ಲಿ ಕೆಲವರನ್ನು ಕೊಲೆಮಾಡುವರು; ಕೆಲವರನ್ನು ಹಿಂಸೆಪಡಿಸುವರು. 50-51ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಆಬೇಲನ ರಕ್ತ ಮೊದಲ್ಗೊಂಡು, ಬಲಿಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕ ಕೊಡಬೇಕಾಗುವುದು. ಹೌದು, ಈ ಪೀಳಿಗೆಯವರೇ ಲೆಕ್ಕ ಕೊಡಬೇಕಾಗುವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. 52ಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ಜ್ಞಾನವೆಂಬ ಮಂದಿರದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವೂ ಒಳಕ್ಕೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ಬಿಡುವುದಿಲ್ಲ,” ಎಂದರು.
53ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಅವರನ್ನು ಕಠಿಣವಾಗಿ ಪ್ರತಿಭಟಿಸಲಾರಂಭಿಸಿದರು. ಹಲವಾರು ವಿಷಯಗಳನ್ನು ಕುರಿತು ಮಾತಾಡುವಂತೆ ಕೆಣಕಿ, 54ಅವರ ಮಾತಿನಲ್ಲಿ ಏನಾದರೂ ತಪ್ಪು ಕಂಡು ಹಿಡಿಯಲೇಬೇಕೆಂದು ಹೊಂಚು ಹಾಕುತ್ತಿದ್ದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ